ಭಾರತದ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಗದಗ-ಬೆಟಗೇರಿಯಿಂದ 11 ಕಿಮೀ ದೂರದಲ್ಲಿದೆ. ಪ್ರಾಚೀನ ಕಾಲದಲ್ಲಿ ಲೊಕ್ಕಿಯ ಗುಂಡಿ ಎಂದು ಪ್ರಸಿದ್ಧವಾಗಿದ್ದ ಈ ಊರು ಹನ್ನೊಂದು, ಹನ್ನೆರಡನೆಯ ಶತಮಾನಗಳಲ್ಲಿ ಬೆಳ್ವೊಲ 300 ಪ್ರಾಂತಕ್ಕೆ ಸೇರಿತ್ತು. ಬೆಳ್ವೊಲದ 18 ಅಗ್ರಹಾರಗಳಲ್ಲಿ ಇದೂ ಒಂದಾಗಿತ್ತು. ಶಾಸನಗಳಲ್ಲಿ ಈ ಊರನ್ನು ಶ್ರೀಗೆವಿಭೂತಿಗೆ ಧರ್ಮಕ್ಕಾಗರಮೆನಲಿಂದ್ರನಗ್ಗದಮರಾ ವತಿಗಂ ಭೋಗಾವತಿಗಂ ಸಲೆ ಮೇಲಾಗಿಪ್ಪುದು ಧರೆಗೆ ಎಂದು ಪ್ರಕಟಿಸಲಾಗಿದೆ. ದಾಶರಥಿ ವಿನಿರ್ಮಿತ ರಾಮರದತ್ತಿ, ಶ್ರೀಮದ್ರಾಮಮ ಹೇಂದ್ರದತ್ತ ಎಂದು ಕರೆದಿದೆ. ಇಲ್ಲಿಯ ಮಹಾಜನರನ್ನು ವಿದಿತವೇದಾ ರ್ಥವಿದ್ಯಾಪಾರಗರ್, ಷಟ್ಕರ್ಮನಿರತರ್, ಸಪ್ತಸೋಮ ಸಂಸ್ಥಾವಭೃತಾವ ಗಾಹನಪವಿತ್ರೀಕೃತಶರೀರರ್, ಅಷ್ಟಾದಶಧರ್ಮ ಶಾಸ್ತ್ರಕುಶಳರ್, ಶಾಪಾನು ಗ್ರಹಸಮತ್ರ್ಥರ್, ವೈಷ್ಣಚಗೀತಮನೋಹರರ್ ದ್ವಿಜಕುಳತಿಳಕರ್ ಎಂದು ವರ್ಣಿಸಲಾಗಿದೆ.
ಲೊಕ್ಕಿಗುಂಡಿಯೊಂದಿಗೆ ರನ್ನಕವಿಯ ಆಶ್ರಯದಾತೆಯಾಗಿದ್ದ ದಾನ ಚಿಂತಾಮಣಿ ಎಂದು ಖ್ಯಾತಳಾಗಿದ್ದ ಅತ್ತಿಮಬ್ಬೆಯ ಹೆಸರು ಬೆಸೆದು ಕೊಂಡಿದೆ. ಈಕೆ ಇಲ್ಲಿ ಬ್ರಹ್ಮಜಿನಾಲಯವೊಂದನ್ನು ಕಟ್ಟಿಸಿದ ಸಂಗತಿ, ಈ ಜಿನಾಲಯಕ್ಕೆ ದತ್ತಿಬಿಡುವಂತೆ ಕಲ್ಯಾಣದ ಚಾಳುಕ್ಯದೊರೆ ಇ¾Âವಬೆಡಂಗ ಸತ್ಯಾಶ್ರಯನಲ್ಲಿ ಬಿನ್ನವಿಸಿಕೊಂಡ ಸಂಗತಿ ಇಲ್ಲಿಯ ಎರಡು ಶಾಸನಗಳಿಂದ ತಿಳಿದುಬರುತ್ತದೆ.

ಲೊಕ್ಕಿಗುಂಡಿ ಕೆಲಕಾಲ ಒಂದು ಉಪರಾಜಧಾನಿಯಾಗಿತ್ತು. ಹೊಯ್ಸಳ ಇಮ್ಮಡಿ ಬಲ್ಲಾಳ ಇದನ್ನು ತನ್ನ ನೆಲೆವೀಡಾಗಿ ಮಾಡಿ ಕೊಂಡಿದ್ದ. ಇಲ್ಲಿ ಬಲವಾದ ಕೋಟೆಯೊಂದಿದ್ದು ಅದನ್ನು ಆಕ್ರಮಿಸಲು ಈತನಿಗೂ ಸೇವುಣರ ಭಿಲ್ಲಮನಿಗೂ ನಡುವೆ ಕದನಗಳಾದುವೆಂದು ತಿಳಿದುಬರುತ್ತದೆ. 1189-90ರಲ್ಲಿ ಭಿಲ್ಲಮ ಹೊಯ್ಸಳರಿಗೆ ಸೇರಿದ್ದ ಪ್ರದೇಶಗಳನ್ನು ಆಕ್ರಮಿಸಲು ತನ್ನ ರಾಜ್ಯದ ದಕ್ಷಿಣಕ್ಕೆ ದಂಡೆತ್ತಿ ಸೊರಟೂರನ್ನು ಆಕ್ರಮಿಸಿದ. ಇದನ್ನು ಕಂಡ ಹೊಯ್ಸಳ ಬಲ್ಲಾಳ ಭಿಲ್ಲಮನನ್ನು ಅಲ್ಲಿಂದ ಹೊರದೂಡಲು ಸೈನ್ಯಾಚರಣೆ ಕೈಗೊಂಡ. ಆಗ ನಡೆದ ಪ್ರಸಿದ್ಧವಾದ ಸೊರಟೂರಿನ ಕದನದಲ್ಲಿ ಭಿಲ್ಲಮನನ್ನು ಬಲ್ಲಾಳ ಹಿಮ್ಮೆಟ್ಟಸಿದ. ಅನಂತರ ಆತ ಮುಂಜಾಗರೂಕತೆಯ ದೃಷ್ಟಿಯಿಂದ ಕೆಲಕಾಲ ಲೊಕ್ಕಿಗುಂಡಿಯನ್ನೇ ತನ್ನ ನೆಲೆವೀಡಾಗಿ ಮಾಡಿಕೊಂಡ. ಈ ಸುತ್ತಲಿನ ಪ್ರದೇಶಕ್ಕಾಗಿ ಈ ಎರಡು ಬಣಗಳ ನಡುವೆ ಕಲಹಗಳು ಆಗುತ್ತಲೇ ಇದ್ದುವು. ಭಿಲ್ಲಮನ ಅನಂತರ ಜೈತುಗಿ ಲಕ್ಕುಂಡಿಯನ್ನು ಪ್ರಯಾಸಪಟ್ಟು ಆಕ್ರಮಿಸಿದನಾದರೂ ಮತ್ತೊಮ್ಮೆ ಬಲ್ಲಾಳ ಅದನ್ನು ಕಸಿದುಕೊಂಡ. 12ನೆಯ ಶತಮಾನದ ಅನಂತರ ಲೊಕ್ಕಿಗುಂಡಿ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿತು. ಕಲ್ಯಾಣದ ಚಾಳುಕ್ಯರ ಆಳಿಕೆಯ ಕಾಲದಲ್ಲಿ ಇದೊಂದು ಪ್ರಮುಖ ಟಂಕಶಾಲೆಯಾಗಿತ್ತು. ಅನೇಕ ಶಾಸನಗಳಲ್ಲಿ ಪ್ರಸ್ತಾಪಿಸಲ್ಪಟ್ಟ ಇತಿಹಾಸ ಪ್ರಸಿದ್ಧ ಲೊಕ್ಕಿಯ ಪೊಂಗದ್ಯಾಣ ಇಲ್ಲಿಯ ಟಂಕಶಾಲೆಯಲ್ಲಿ ಅಚ್ಚಾದುದು.

ಲಕ್ಕುಂಡಿಯಲ್ಲಿ ಮಲ್ಲಿಕಾರ್ಜುನ, ಸೋಮೇಶ್ವರ, ನನ್ನೇಶ್ವರ, ವೀರಭದ್ರ, ಚಂದ್ರಮೌಳೇಶ್ವರ, ಮಾಣಿಕೇಶ್ವರ ಮುಂತಾದ 20ಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳನ್ನು ಕಟ್ಟಿಸಿದ ಕಾಲ ಸ್ಪಷ್ಟವಿಲ್ಲವಾದರೂ ಇಲ್ಲಿ ಲಭ್ಯವಾಗಿರುವ ಶಾಸನಗಳಲ್ಲೆಲ್ಲ ಕಲ್ಯಾಣ ಚಾಳುಕ್ಯ ಅರಸ ವಿಕ್ರಮಾದಿತ್ಯ ಹಾಗೂ ಅನಂತರ ಆಳಿದ ಮುಮ್ಮಡಿ ತೈಲಪ ಹಾಗೂ ನಾಲ್ವಡಿ ಸೋಮೇಶ್ವರರ ಮತ್ತು ಕಳಚುರಿ ಹಾಗೂ ಹೊಯ್ಸಳ ಅರಸರ ಶಾಸನಗಳು ಅತಿ ಪ್ರಾಚೀನವಾದುವು.

ಕಾಶೀವಿಶ್ವನಾಥನ ದೇವಾಲಯದಲ್ಲಿ ಹೊಯ್ಸಳರ ಕಲೆಯ ಭವ್ಯತೆಯನ್ನು ಕಾಣಬಹುದು. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ವೈಭವದಿಂದ ಮೆರೆಯುತ್ತಿದ್ದ ಈ ದೇವಾಲಯ ಚೋಳರ ದುರಾಕ್ರಮಣ ಮತ್ತು ಅತ್ಯಾಚಾರಗಳಿಗೊಳಗಾಗಿ ಭಗ್ನವಾಗಿತ್ತು. ಇಲ್ಲಿಯ ಗರ್ಭಗುಡಿಯ ಮುಂದಿನ ಪಡಸಾಲೆಯ ತೊಲೆಯ ಕಂಬದಲ್ಲಿ ಮುಮ್ಮಡಿ ತೈಲಪನ ಎರಡು ಶಾಸನಗಳಿವೆ. ಅಲ್ಲದೆ, ಈ ಭಾಗದ ಕಲೆಯನ್ನು ದೇವಾಲಯದ ಹೊರಾಂಗಣದ ಹಾಗೂ ಮಹಾದ್ವಾರದ ಕಲೆಗೆ ಹೋಲಿಸಿ ನೋಡಿದಾಗ ಈ ಒಳಭಾಗ ಮೂಲತಃ ಚಾಳುಕ್ಯರ ಕಾಲದ ಕಟ್ಟಡ ಎಂಬುದು ಸ್ಪಷ್ಟವಾಗುತ್ತದೆ.  ಈ ದೇವಾಲಯವನ್ನು ಹಿಂದೆ ಕವತಾಳೇಶ್ವರಾಲಯ ಎಂದು ಕರೆಯುತ್ತಿದ್ದಂತೆ ದೇವಾಲಯದ ತೊಲೆಗಳಲ್ಲಿಯ ಶಾಸನಗಳಿಂದ ಕಂಡುಬರುತ್ತದೆ. 1162ರಲ್ಲಿ ಬಾಚಿರಾಜ ಮತ್ತು ಮಾಕಿಕವ್ವೆಗಳ ಪುತ್ರ ಲೊಕ್ಕಿಗುಂಡಿಯ ಶ್ರೀಸಾಸಿವ್ರ್ವರ ಪ್ರಿಯಪುತ್ರನೆನೆಸಿದ ಪೆಗ್ಗಡೆಯರ ತ್ರಿಭುವನ ಮಲ್ಲ ಕೇಶವದೇವನು ಗ್ರಾಮಾಧಿದೈವವಾದ ಕವತಾಳೇಶ್ವರದ ಆಚಾರ್ಯರಾದ ಸೋಮೇಶ್ವರಪಂಡಿತರಿಗೆ ವರ್ಷಂಪ್ರತಿ 3 ಹೊನ್ನನ್ನು ದೇವಗ್ರ್ಗೆ ಪ್ರಭಾತದ ತುಯ್ಯಲನಿವೇದ್ಯಕ್ಕೆಂದು ದಾನಮಾಡಿದನೆಂದು ತಿಳಿದುಬರುತ್ತದೆ. ದೇವಾಲಯದ ಹೊರಗೋಡೆಯ ಮೇಲೆ ರಾಮಾಯಣದ ಕೆಲವು ಚಿತ್ರಗಳನ್ನು ಕೆತ್ತಲಾಗಿದೆ.  ಲಕ್ಕುಂಡಿಯ ದೇವಾಲಯಗಳಲ್ಲೆಲ್ಲ ಜೈನಬಸದಿಯೇ (ಬ್ರಹ್ಮಜಿನಾಲಯ) ಪ್ರಾಚೀನವಾದದ್ದು. ಕಲ್ಯಾಣ ಚಾಳುಕ್ಯರ ಕಾಲದ ವಾಸ್ತುಶೈಲಿಯ ಒಂದು ಅಂಶವಾದ ಕಲಾಪೂರ್ಣವಾದ ದ್ವಾರಗಳಿಗೆ ಪ್ರಾಚೀನ ಹಾಗೂ ಉತ್ತಮ ನಿದರ್ಶನವನ್ನು ಈ ಬಸದಿಯಲ್ಲಿ ಕಾಣಬಹುದು.

ಇದಲ್ಲದೆ ಈ ಗ್ರಾಮದಲ್ಲಿ ಇನ್ನೂ ಎರಡು ಬಸದಿಗಳಿವೆ. ಇವುಗಳಲ್ಲಿ ಒಂದನ್ನು ಈಗ ನಾಗನಾಥಾಲಯವೆನ್ನುತ್ತಾರೆ. ಆದರೆ ವಾಸ್ತವಿಕವಾಗಿ ಇದು ಪಾಶ್ರ್ವನಾಥ ಬಸದಿ. ಈಗ ಅದರ ಗರ್ಭಗುಡಿಯಲ್ಲಿ ವಿಗ್ರಹದ ಪೀಠ ಹಾಗೂ ಪಾಶ್ರ್ವನಾಥ ತಲೆಯ ಮೇಲಿರಬೇಕಾದ ಹೆಡೆಯುಳ್ಳ ಸರ್ಪ ಮಾತ್ರ ಇದೆ. ಈ ಜೈನ ಬಸದಿಗೆ ಘಟಾಂತಿಕೆಯ ಬಸದಿ ಎಂಬ ಇನ್ನೊಂದು ಬಸದಿ ಪ್ರತಿಬದ್ಧವಾಗಿತ್ತೆಂದು ಶಾಸನಗಳಲ್ಲಿ ಹೇಳಿದೆ.  ಇವುಗಳಲ್ಲದೆ ನೋಂಪಿಯ ಬಸದಿ, ಕಮ್ಮಟ ಜಿನಾಲಯ ಎಂಬ ಇನ್ನೂ ಎರಡು ಬಸದಿಗಳ ಉಲ್ಲೇಖ ಶಾಸನಗಳಲ್ಲಿ ಬರುತ್ತದೆ. ಈಗಿನ ಗಣೇಶನ ಗುಡಿಯ ಮಾಳಿಗೆಗೆ ಸೇರಿಸಿರುವ ಕಲ್ಲಿನಲ್ಲಿರುವ ಶಾಸನ (1165) ಚಾಳುಕ್ಯ ನಾಲ್ಕನೆಯ ಸೋಮೇಶ್ವರನದು. ಇದರಲ್ಲಿ ನೋಂಪಿಯ ಬಸದಿಯ ದೇವರಿಗೆ, ಕಮ್ಮಟೇಶ್ವರ ದೇವರಿಗೆ ಮತ್ತು ಕಮ್ಮಟ ಜಿನಾಲಯದ ಶಾಂತಿನಾಥ ದೇವರಿಗೆ ನೀಡಲಾದ ದಾನಗಳನ್ನು ನಿರೂಪಿಸಲಾಗಿದೆ.
	(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ